ಉಪದೇಶ

ವ್ಯಾಪಾರ ಮಾಡಬೇಕೆಂದಿದ್ದೇನೆ, ಉಪದೇಶ ನೀಡಿ .ಸ್ವಾಮೀಜಿ ನಿನ್ನ ಕೈನಲ್ಲಿರುವ ಮೊಬೈಲನ್ನು ಆ ಗೋಡೆಗೆ ರಭಸವಾಗಿ ಎಸೆ.ಮೊಬೈಲ್ ನೂರು ಚೂರಾಗಿ ಕೆಳಗೆ ಬಿತ್ತು. ಆತನ ಕಣ್ಣಲ್ಲಿ ಆಶ್ಚರ್ಯ ಮತ್ತು ದುಃಖ. ಸ್ವಾಮೀಜಿ ಹೇಳಿದರು. ಇದೇ ವ್ಯಾಪಾರದ ಮೊದಲ ಮಂತ್ರ, ಕಣ್ಣುಮುಚ್ಚಿಕೊಂಡು ಯಾರನ್ನೂ ನಂಬಬೇಡ.

-ಗೋಪಕುಮಾರ್ ವಿ. ಮೈಸೂರು

ಮರೆವು

ಮೊಬೈಲ್ ಫೋನ್ ಒಂದು ಪುಟ್ಟ ಪ್ರಪಂಚ. ಇದರಿಂದ ವಿಶ್ವದ ಯಾವ ಮೂಲೆಗಾದರೂ ಸಂದೇಶ ಕಳುಹಿಸಬಹುದು, ಯಾರೊಂದಿಗೆ ಬೇಕಾದರೂ ಮಾತನಾಡಬಹುದು ಎಂದಿದ್ದ ಅವನು ಅದೇ ಫೋನಿನಿಂದ ತನ್ನ ವೃದ್ಢ ತಂದೆ ತಾಯಿಯರೊಂದಿಗೆ ಮಾತನಾಡಬಹುದೆಂಬುದನ್ನು ಯಾಕೋ ಮರೆತಿದ್ದ.

-ಗೋಪಕುಮಾರ್ ವಿ. ಮೈಸೂರು

ಹುಡುಕಾಟ

ತುಂಬಾ ದಿನಗಳ ಹುಡುಕಾಟದ ನಂತರ ಅವನಿಗದು ದೊರಕಿತು. ಹುಡುಕಾಟದ ನಂತರ ಅವನಿಗದು ದೊರಕಿತು. ಹುಡುಕಾಟದ ರುಚಿ ಹತ್ತಿದ್ದ ಆತನಿಗೆ ಮರುಕ್ಷಣದಲ್ಲೇ ಮತ್ತೊಂದು ಯೋಚನೆ ಹೊಳೆಯಿತು. ಇನ್ನೂ ಹುಡುಕಿದರೆ ಇದಕ್ಕಿಂತ ಒಳ್ಳೆಯದು ದೊರೆಯಬಹುದೇನೋ.

-ಗೋಪಕುಮಾರ್ ವಿ. ಮೈಸೂರು

ಒಳ್ಳೆಯ ಕಾಲ

ನಮಗೂ ಒಳ್ಳೆಯ ಕಾಲ ಬಂದೇ ಬರುತ್ತೆ ಎಂದು ಹೇಳುತ್ತಿದ್ದರು ದಂಪತಿಗಳು. ಬಾಗಿಲು ಬಡಿದ ಶಬ್ದವಾಯಿತು. ಯಾರು ಬಾಗಿಲು ತೆರೆಯಬೇಕು? ಇಬ್ಬರಲ್ಲೂ ಜಗಳ ಪ್ರಾರಂಭವಾಯಿತು. ಜಗಳ ಮುಗಿಯುವಷ್ಟರಲ್ಲಿ ಬಾಗಿಲು ಬಡಿಯುವ ಶಬ್ದ ನಿಶ್ಚಲವಾಯಿತು.

-ಗೋಪಕುಮಾರ್ ವಿ. ಮೈಸೂರು

ಆ ದಿನಗಳು

ಇಂದವನು ನನ್ನ ಸೌಂದರ್ಯಕ್ಕೆ ಕಾಂಪ್ಲಿಮೆಂಟ್ ನೀಡಿದ ಎಂದು ಗರ್ವದಿಂದ ಮಗಳು ಹೇಳಿದಾಗ, ಅಮ್ಮನಿಗೆ ಕಾಲೇಜಿನ ಅವಳಿ ಅಶೋಕಮರದ ಬಳಿ ತನಗಾಗಿ ದಿನವೂ ಪುಟ್ಟ ನಗುವೊಂದನ್ನು ಸನ್ಮಾನಿಸಲು ನಿಂತಿರುತ್ತಿದ್ದ ಕೋಲು ಮುಖದವನು ಸುಮ್ಮನೆ ನೆನಪಾದ.

-ಗೋಪಕುಮಾರ್ ವಿ. ಮೈಸೂರು